ಬಳ್ಳಾರಿ: ಜಿಲ್ಲೆಯಾದ್ಯಂತ ಹಕ್ಕಿಜ್ವರದ ಹಾವಳಿ ಕಾಣಿಸಿಕೊಂಡಿದ್ದು, ಒಂದೇ ಫಾರಂನಲ್ಲಿ 8,000 ಕೋಳಿಗಳು ಸಾವನ್ನಪ್ಪಿದೆ. ನಿನ್ನೆ ಸಂಡೂರಲ್ಲಿ 2400 ಕೋಳಿಗಳ ಮಾರಣ ಹೋಮ ನಡೆದಿತ್ತು. ರಾಜ್ಯದಲ್ಲೇ ಅತಿ ಹೆಚ್ಚು ಕೋಳಿ ಫಾರಂ ಬಳ್ಳಾರಿ ಜಿಲ್ಲೆಯಲ್ಲಿದ್ದು ಜ್ವರದ ಹಾವಳಿಯಿಂದಾಗಿ ಕುಕ್ಕುಟೋದ್ಯಮಕ್ಕೆ ಸಂಕಟ ಎದುರಾಗಿದೆ.
ಬಳ್ಳಾರಿ ಹೊರವಲಯದ ಕಪ್ಪಗಲ್ಲು ಗ್ರಾಮದ ಕೋಳಿ ಫಾರಂವೊಂದರಲ್ಲಿ ವಾರದಿಂದೀಚೆಗೆ 8 ಸಾವಿರ ಕೋಳಿಗಳು ಸಾವಿಗೀಡಾಗಿವೆ. ಕೋಳಿ ಸಾವಿಗೆ ಹಕ್ಕಿ ಜ್ವರ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು ಪರೀಕ್ಷೆಗಾಗಿ ಮಾದರಿಯನ್ನು ಬೆಂಗಳೂರಿಗೆ ಕಳಿಸಿಕೊಡಲಾಗಿದೆ. ಬಳಿಕ ಭೋಪಾಲ್‌ನಲ್ಲಿರುವ ‘ರಾಷ್ಟ್ರೀಯ ಉನ್ನತ ಪ್ರಾಣಿ ರೋಗಗಳ ಸಂಸ್ಥೆ’ಗೆ ರವಾನಿಸಿ ಪರೀಕ್ಷೆ ನಡೆಸಲಾಗುವುದು. ಸೋಮವಾರದ ವೇಳೆಗೆ ಪರೀಕ್ಷಾ ವರದಿ ಬರಬಹುದು. ಹಕ್ಕಿ ಜ್ವರ ಇರುವುದು ದೃಢಪಟ್ಟರೆ, ಉಳಿದ ಕೋಳಿಗಳನ್ನೂ ವಧೆ ಮಾಡಲಾಗುವುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಕಾರಬಾರಿ ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ, ಹಕ್ಕಿಜ್ವರದ ಸುದ್ದಿಯಿಂದಾಗಿ ಕೋಳಿ ಮಾಂಸ ಹಾಗೂ ಮೊಟ್ಟೆಗೆ ಬೇಡಿಕೆಯ ಕೊರತೆ ಉಂಟಾಗಿದ್ದು, ದರ ಕುಸಿದಿದೆ.
