Home ರಾಜ್ಯ ಕೊಪ್ಪಳ: ವಿದೇಶಿ ಮಹಿಳೆ ಸಾಮೂಹಿಕ ಅತ್ಯಾಚಾರ ಪ್ರಕರಣ; ಆಘಾತಕರ ಎಂದ ಕೇಂದ್ರ

ಕೊಪ್ಪಳ: ವಿದೇಶಿ ಮಹಿಳೆ ಸಾಮೂಹಿಕ ಅತ್ಯಾಚಾರ ಪ್ರಕರಣ; ಆಘಾತಕರ ಎಂದ ಕೇಂದ್ರ

ಬೆಂಗಳೂರು: ಕೊಪ್ಪಳ ಬಳಿ ಪ್ರವಾಸಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಹಲ್ಲೆ ಪ್ರಕರಣವನ್ನು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕರ್ನಾಟಕದ ಕೊಪ್ಪಳದಲ್ಲಿ ಇಸ್ರೇಲಿ ಪ್ರವಾಸಿ ಮತ್ತು ಹೋಂಸ್ಟೇ ಮಾಲೀಕರ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ ಆಘಾತ ತಂದಿದೆ. ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ, ವಿಶೇಷವಾಗಿ ವಿಶ್ವ ಪರಂಪರೆಯ ತಾಣದ ಸುತ್ತಲಿನ ಪರಿಸ್ಥಿತಿ ಹೇಗಿದೆ ಎಂಬುದಕ್ಕೆ ಈ ಘಟನೆ ಪ್ರತಿಬಿಂಬವಾಗಿದೆ ಎಂದು ಹೇಳಿದ್ದಾರೆ.

ಈ ಘಟನೆಯನ್ನು ಬಲವಾಗಿ ಖಂಡಿಸುತ್ತೇವೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇನೆಂದು ತಿಳಿಸಿದ್ದಾರೆ.

ಘಟನೆಯಿಂದ ಹಂಪಿಯಂತಹ ಪ್ರಸಿದ್ಧ ಪ್ರವಾಸಿ ತಾಣದ ಸುತ್ತ ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯವು ಅದರ ಪ್ರವಾಸೋದ್ಯಮ ನಿರೀಕ್ಷೆಗಳು ಮತ್ತು ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಏತನ್ಮಧ್ಯೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಲ್ಲೆ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಯುವಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಪೊಲೀಸರು ಗಂಗಾವತಿ ನಿವಾಸಿಗಳಾದ ಮಲ್ಲೇಶ್ ಅಲಿಯಾಸ್ ಹಂಡಿಮಲ್ಲ (22) ಮತ್ತು ಚೇತನ್ ಸಾಯಿ (21) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಮೂರನೇ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ.

 

 
Previous articleಬಬ್ಬುಸ್ವಾಮಿ ದೈವಸ್ಥಾನದಲ್ಲಿ ಸಿರಿಸಿಂಗಾರದ ನೇಮ
Next article‘ಛಾವಾ’ ಚಿತ್ರದ ಚಿನ್ನದ ಬೇಟೆ: ಆಸಿರ್‌ಗಢ ಕೋಟೆಯಲ್ಲಿ ನೆಲ ಅಗೆಯುತ್ತಿರುವ ಜನ