ಬೆಂಗಳೂರು: ಮೆಟ್ರೊ ಪ್ರಯಾಣ ದರ ಏರಿಸಿದ್ದು ಕೇಂದ್ರ ಸರ್ಕಾರ ಎನ್ನುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಯೂಟರ್ನ್ ಹೊಡೆದಿದ್ದು, ಸಮಸ್ಯೆ ಕುರಿತು ಮಧ್ಯ ಪ್ರವೇಶಿಸಿದ್ದಾರೆ. ದರ ಕಡಿಮೆ ಮಾಡಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ವ್ಯವಸ್ಥಾಪಕ ನಿರ್ದೇಶಕ ಎಂ ಮಹಾಬಲೇಶ್ವರ ರಾವ್ ಅವರ ಜೊತೆ ಮಾತನಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿರುವ ಸಿಎಂ, “ಮೆಟ್ರೊ ಪ್ರಯಾಣ ದರ ಪರಿಷ್ಕರಣೆ ಜಾರಿಯಲ್ಲಿ ಕೆಲವು ಸ್ಟೇಜ್ ಗಳಲ್ಲಿ ದರಗಳು ದ್ವಿಗುಣಗೊಂಡಿವೆ. ಇದು ವೈಪರೀತ್ಯಗಳಿಗೆ ಕಾರಣವಾಗಿದೆ. ಈ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಲು ಮತ್ತು ದರಗಳನ್ನು ಕಡಿಮೆ ಮಾಡಲು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ ಎಂಡಿ ಅವರನ್ನು ಕೇಳಿದ್ದೇನೆ. ಪ್ರಯಾಣಿಕರ ಹಿತ ಕಾಪಾಡುವುದು ಮುಖ್ಯ ಎಂದು ಅವರಿಗೆ ಮನವರಿಕೆ ಮಾಡಿದ್ದೇನೆ” ಎಂದಿದ್ದಾರೆ.
ಮೆಟ್ರೊ ದರ ಏರಿಕೆ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಮಾಡಿದ್ದ ಬಿಜೆಪಿಗೆ ತಿರುಗೇಟು ನೀಡಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ. ಕೆ. ಶಿವಕುಮಾರ್, ಬಿಜೆಪಿಯವರಿಗೆ ರಾಜಕೀಯ ಹೊರತುಪಡಿಸಿ ಬೇರೇನೂ ಗೊತ್ತಿಲ್ಲ, ಮೆಟ್ರೊ ಯೋಜನೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಶೇಕಡಾ 50:50 ಅನುಪಾತದಲ್ಲಿ ಮಾಡಲಾಗುತ್ತದೆ. ದರ ಏರಿಕೆಗೆ ಒಂದು ಸಮಿತಿ ಮಾಡಲಾಗಿದೆ. ಕೇಂದ್ರ ಸರ್ಕಾರ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ಮಾಡಿರುತ್ತಾರೆ. ಆ ಸಮಿತಿಯ ತೀರ್ಮಾನ ನಮ್ಮ ಗಮನಕ್ಕೆ ಬರುವುದಿಲ್ಲ. ದರ ಏರಿಕೆ ತೀರ್ಮಾನ ಅವರು ಮಾಡಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ ಎಂದಿದ್ದರು.
ಆದರೆ ಇದೀಗ ಮಧ್ಯಪ್ರವೇಶಿಸಿದ್ದು ಮೆಟ್ರೋ ದರ ಇಳಿಸುವಂತೆ ರೈಲು ನಿಗಮಕ್ಕೆ ಕೇಳಿಕೊಂಡಿರುವುದಾಗಿ ಹೇಳಿದ್ದಾರೆ.
