ಬೆಂಗಳೂರು: ಪುಸ್ತಕ ಮತ್ತು ಸಾಹಿತ್ಯ ಓದುವುದರಿಂದ ಮನುಷ್ಯನು ಮಾನವೀಯತೆ ಮೆರೆಯುತ್ತಾನೆ. ಹೀಗಾಗಿ ಪ್ರತಿಯೊಬ್ಬರು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹೇಳಿದರು.
ಇದೇ ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ ಆಯೋಜಿಸಲಾಗಿರುವ ಪುಸ್ತಕ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿ ಮಾತನಾಡಿದರು.
ವಿಧಾನಸೌಧದಲ್ಲಿ ಓದುಗರು, ಸಾಹಿತ್ಯಾಭಿಮಾನಿಗಳಿಗೆ ಸಂತೆ ಏರ್ಪಡಿಸಲಾಗಿದ್ದು, ಸಾಹಿತ್ಯಾಸಕ್ತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇದೊಂದು ಉತ್ತಮ ಬೆಳವಣಿಗೆ, ಮುಂದೆ ಪ್ರತಿ ವರ್ಷ ವಿಧಾನಸೌಧದಲ್ಲಿ ಸಾಹಿತ್ಯ, ಪುಸ್ತಕೋತ್ಸವ ನಡೆಯಲಿದ್ದು, ಪ್ರತಿಯೊಬ್ಬರೂ ಪುಸ್ತಕ ಖರೀದಿಸಿ, ಮನೆಯಲ್ಲಿ ಗ್ರಂಥಾಲಯ ಹೊಂದಬೇಕು. ಮಕ್ಕಳು ಮೊಬೈಲ್, ಡಿಜಿಟಲ್ ವ್ಯಸನದಿಂದ ಮುಕ್ತಿ ಹೊಂದಬೇಕು ಎಂದು ಸಲಹೆ ನೀಡಿದರು.
ಪುಸ್ತಕ ಮೇಳ ಆಯೋಜಿಸಿದ್ದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಶಾಸಕರು ಅವರ ನಿಧಿಯಿಂದ ರೂ.2 ಲಕ್ಷವರೆಗಿನ ಪುಸ್ತಕಗಳನ್ನು ಖರೀದಿಸಲು ಅವಕಾಶವಿದೆ. ಈ ಪುಸ್ತಕಗಳನ್ನು ತಮ್ಮ ಕ್ಷೇತ್ರಗಳ ಸಾರ್ವಜನಿಕ ಗ್ರಂಥಾಲಯಗಳು ಮತ್ತು ಶಾಲೆಗಳಿಗೆ ವಿತರಿಸಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಪುಸ್ತಕ ಕೊಳ್ಳುವವರಿಗೆ ರಿಯಾಯಿತಿ ದರದಲ್ಲಿ ಪುಸ್ತಕಗಳು ಸಿಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ಗೋವಾದ ದಾಮೋದರ ಮೌಜೊ, ಬೊಳುವಾರು ಮಹಮದ್ ಕುಂಞಿ ಸೇರಿದಂತೆ ಇತರೆ ಸಾಹಿತಿಗಳನ್ನು ಸನ್ಮಾನಿಸಲಾಯಿತು.
