ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕನ್ನಡ ನಟಿ ರನ್ಯಾ ರಾವ್ ಗೆ ಸಂಬಂಧಿಸಿದ ಮೆಸರ್ಸ್ ಕ್ಸಿರೋಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಜನವರಿ 2, 2023 ರಂದು 12 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಿಇಒ ಮಹೇಶ್ ಸ್ಪಷ್ಟಪಡಿಸಿದ್ದಾರೆ.
ತುಮಕೂರು ಜಿಲ್ಲೆಯ ಸಿರಾ ಕೈಗಾರಿಕಾ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಭೂಮಿಯನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ 137 ನೇ ರಾಜ್ಯ ಮಟ್ಟದ ಏಕ ವಿಂಡೋ ಕ್ಲಿಯರೆನ್ಸ್ ಸಮಿತಿ (ಎಸ್‌ಎಲ್‌ಎಸ್‌ಡಬ್ಲ್ಯೂಸಿಸಿ) ಸಭೆಯಲ್ಲಿ ಹಂಚಿಕೆಗೆ ಅನುಮೋದಿಸಲಾಗಿದೆ ಎಂದು ಮಹೇಶ್ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆಯ ಪ್ರಕಾರ, ಕಂಪನಿಯು 138 ಕೋಟಿ ರು. ಹೂಡಿಕೆಯೊಂದಿಗೆ ಉಕ್ಕಿನ ಟಿಎಂಟಿ ಬಾರ್‌ಗಳು, ರಾಡ್‌ಗಳು ಮತ್ತು ಸಂಬಂಧಿತ ಉತ್ಪನ್ನಗಳಿಗಾಗಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಈ ಯೋಜನೆಯು ಸುಮಾರು 160 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿತ್ತು.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರ ನಟಿ ರನ್ಯಾ ರಾವ್ ಅವರು ರಾಜ್ಯದ ಪ್ರಭಾವಿ ರಾಜಕೀಯ ನಾಯಕರ ಜತೆ ನಂಟು ಹೊಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ರಾಜಕೀಯ ವ್ಯಕ್ತಿಗಳ ಜತೆಗಿನ ನಂಟಿನ ಕಾರಣದಿಂದಲೇ ಜಮೀನು ಮಂಜೂರಾಗಿದೆ ಎಂದು ತಿಳಿದು ಬಂದಿದೆ.
