
ಮೈಸೂರು: ಕಂಪನಿ ನಡೆಸುವ ಆಂತರಿಕ ಮೌಲ್ಯಮಾಪನದಲ್ಲಿ ತೇರ್ಗಡೆಯಾಗಲು ವಿಫಲವಾದ ಬಳಿಕ ಇನ್ಫೋಸಿಸ್ನ ಮೈಸೂರು ಕ್ಯಾಂಪಸ್ನಲ್ಲಿ 300 ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳನ್ನು ಇತ್ತೀಚೆಗೆ ವಜಾಗೊಳಿಸಲಾಗಿದೆ. ಮನಿ ಕಂಟ್ರೋಲ್ ವರದಿಯ ಪ್ರಕಾರ, ವಜಾಗೊಳಿಸಲಾದ ಪ್ರಶಿಕ್ಷಣಾರ್ಥಿಗಳನ್ನುಅದೇ ದಿನ ನಿರ್ಗಮಿಸಲು ಕೇಳಲಾಗಿದೆ. ಒಂದು ರಾತ್ರಿ ತಂಗಲು ಅವರು ಮಾಡಿದ ಮನವಿಗಳನ್ನು ತಿರಸ್ಕರಿಸಲಾಗಿದೆ ಮತ್ತು ತತ್ ಕ್ಷಣ ಹೊರಗೆ ಕ್ಯಾಂಪಸ್ ತೊರೆಯಲು ಸೂಚಿಸಲಾಗಿದೆ.
ಇನ್ಫೋಸಿಸ್ನಿಂದ ವಜಾಗೊಂಡ ಪ್ರಶಿಕ್ಷಣಾರ್ಥಿಗಳು ಕಂಪನಿಯ ಮೈಸೂರು ಕ್ಯಾಂಪಸ್ನಲ್ಲಿ ಮೊದಲ ಹಂತದ ತರಬೇತಿಯನ್ನು ಪೂರ್ಣಗೊಳಿಸಿದ್ದರು. ಆದರೆ ಮೂರು ಪ್ರಯತ್ನಗಳ ನಂತರವೂ ಆಂತರಿಕ ಮೌಲ್ಯಮಾಪನದಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿರಲಿಲ್ಲ ಎಂದು ಪಿಟಿಐ ಸಂಸ್ಥೆಯನ್ನು ಉಲ್ಲೇಖಿಸಿದ ಮೂಲಗಳು ತಿಳಿಸಿವೆ.
ಈ ಬಗ್ಗೆ ಇನ್ಫೋಸಿಸ್ ಹೇಳಿಕೆ ನೀಡಿದ್ದು, “ಇನ್ಫೋಸಿಸ್ನಲ್ಲಿ ನಾವು ಕಠಿಣ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದ್ದೇವೆ. ನಮ್ಮ ಮೈಸೂರು ಕ್ಯಾಂಪಸ್ನಲ್ಲಿ ವ್ಯಾಪಕವಾದ ಮೊದಲ ಹಂತದ ತರಬೇತಿಯನ್ನು ಪಡೆದ ನಂತರ ಎಲ್ಲಾ ಫ್ರೆಷರ್ಗಳು ಆಂತರಿಕ ಮೌಲ್ಯಮಾಪನಗಳನ್ನು ತೆರವುಗೊಳಿಸುವ ನಿರೀಕ್ಷೆ ಇತ್ತು. ಎಲ್ಲಾ ಫ್ರೆಶರ್ಗಳು ಮೌಲ್ಯಮಾಪನ ಪರೀಕ್ಷೆಯನ್ನು ತೆರವುಗೊಳಿಸಲು ಮೂರು ಅವಕಾಶಗಳನ್ನು ಪಡೆಯುತ್ತಾರೆ, ಅದು ವಿಫಲವಾದರೆ ಅವರು ಸಂಸ್ಥೆಯೊಂದಿಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂದು ಒಪ್ಪಂದದಲ್ಲಿ ಉಲ್ಲೇಖವಾಗಿದೆ “ಎಂದಿದೆ.
ಐಟಿ ಉದ್ಯೋಗಿಗಳ ಒಕ್ಕೂಟ NITES ಪ್ರಕಾರ, ಈ ಕ್ರಮವು ಹೆಚ್ಚಿನ ಸಂಖ್ಯೆಯ ಹೊಸ ನೇಮಕಾತಿಗಳ ಮೇಲೆ ಪರಿಣಾಮ ಬೀರಿದೆ. ಈ ಬಗ್ಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಸೂಚಿಸುವುದಾಗಿ ಮತ್ತು ಪ್ರತಿಭಟಿಸುವುದಾಗಿ ತಿಳಿಸಿದೆ.
