ಬೆಂಗಳೂರು: ರಾಜ್ಯಗಳ ತೆರಿಗೆ ಹಂಚಿಕೆಯನ್ನು ಶೇ 41 ರಿಂದ ಶೇ 40 ಕ್ಕೆ ಕಡಿತಗೊಳಿಸಲು ಎನ್‌ಡಿಎ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದ್ದು, ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತೆರಿಗೆ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯವನ್ನು ಮನವಿ-ಮಾತುಕತೆ ಮೂಲಕ ಪರಿಹರಿಸಲು ನಡೆಸುತ್ತಿರುವ ಪ್ರಯತ್ನ ವಿಫಲವಾದಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯಕ್ಕೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ತೆರಿಗೆ ಪಾಲನ್ನು ಇನ್ನಷ್ಟು ಕಡಿತಗೊಳಿಸಲು ಕೇಂದ್ರ ಸರ್ಕಾರ ಮಾಡುತ್ತಿರುವ ಪ್ರಯತ್ನ ಕರ್ನಾಟಕ ವಿರೋಧಿ ಮಾತ್ರವಲ್ಲ, ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಾರುವ ಸಂವಿಧಾನಕ್ಕೆ ಕೂಡಾ ವಿರುದ್ಧವಾಗಿದೆ. ರಾಜ್ಯದ ತೆರಿಗೆ ಪಾಲನ್ನು ಶೇಕಡಾ 41ರಿಂದ 40ಕ್ಕೆ ಇಳಿಸಲು ಶಿಫಾರಸು ಮಾಡುವಂತೆ ಹಣಕಾಸು ಆಯೋಗಕ್ಕೆ ಕೇಂದ್ರದ ಎನ್‌ಡಿಎ ಸರ್ಕಾರ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
ನರೇಂದ್ರ ಮೋದಿ ಅವರು ಪ್ರಧಾನಿಯಾದ ದಿನದಿಂದ ಕೇಂದ್ರ ಸರ್ಕಾರದ ನೀತಿ-ನಿರ್ಧಾರಗಳನ್ನು ಗಮನಿಸುತ್ತಾ ಬಂದರೆ ನಿರಂತರವಾಗಿ ರಾಜ್ಯಗಳ ಸಂವಿಧಾನಬದ್ಧ ಅಧಿಕಾರಗಳನ್ನು ಮೊಟಕುಗೊಳಿಸುತ್ತಾ ಅವುಗಳನ್ನು ದುರ್ಬಲಗೊಳಿಸುತ್ತಾ ಬಂದಿರುವುದನ್ನು ಕಾಣಬಹುದು. ರಾಜ್ಯಗಳು ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ನೀಡುವ ತೆರಿಗೆಯಲ್ಲಿ ನ್ಯಾಯಬದ್ಧ ಪಾಲು ರಾಜ್ಯಗಳಿಗೆ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕಾಗಿರುವ ಜವಾಬ್ದಾರಿಯನ್ನು ಹೊಂದಿರುವ ಕೇಂದ್ರ ಹಣಕಾಸು ಆಯೋಗ ರಾಜ್ಯಗಳ ಹಕ್ಕುಗಳನ್ನು ದಮನಿಸಲು ಹೊರಟ ಕೇಂದ್ರ ಸರ್ಕಾರದ ಕೈಗಳ ಆಯುಧವಾಗಿರುವುದು ದುರಂತವೇ ಸರಿ. ರಾಜ್ಯಗಳು ಕೇಂದ್ರ ಸರ್ಕಾರದ ಮರ್ಜಿ ಕಾಯುವಂತಹ ಪರವಾಲಂಬಿ ಸ್ಥಿತಿಗೆ ನೂಕುವುದು ಈ ಹುನ್ನಾರದ ದುರುದ್ದೇಶವಾಗಿರುವಂತೆ ಕಾಣುತ್ತಿದೆ. ಇದನ್ನ ಸಹಿಸಲು ಸಾಧ್ಯ ಇಲ್ಲ ಎಂದು ಕಿಡಿಕಾರಿದ್ದಾರೆ.
ಗ್ಯಾರಂಟಿ ಯೋಜನೆಗಳಂತಹ ಜನಪ್ರಿಯ ಕಾರ್ಯಕ್ರಗಳ ಮೂಲಕ ಕನ್ನಡಿಗರ ಮನಸ್ಸು ಗೆದ್ದಿರುವ ನಮ್ಮ ಸರ್ಕಾರಕ್ಕೆ ಹೇಗಾದರೂ ಮಾಡಿ ಅಪಖ್ಯಾತಿ ತರಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸಿದಂತಿದೆ. ಇದಕ್ಕಾಗಿ ದುರುದ್ದೇಶದಿಂದ ನ್ಯಾಯಬದ್ಧವಾಗಿ ನೀಡಬೇಕಾಗಿರುವ ತೆರಿಗೆ ಪಾಲು ಮತ್ತಿತರ ಅನುದಾನ ನೀಡದೆ ರಾಜ್ಯದ ಖಜಾನೆಯನ್ನು ಬರಿದು ಮಾಡಲು ಹೊರಟಿದೆ. ಇಂತಹ ದಮನಕಾರಿ ನೀತಿಗಳನ್ನು ಎದುರಿಸುವ ಶಕ್ತಿ ಮತ್ತು ಧೈರ್ಯ ರಾಜ್ಯ ಸರ್ಕಾರಕ್ಕಿದೆ. ಈ ಅನ್ಯಾಯವನ್ನು ರಾಜ್ಯದ ಜನತೆಯೂ ಅರ್ಥಮಾಡಿಕೊಂಡಿದ್ದಾರೆ ಎಂದು ನಾನು ನಂಬಿದ್ದೇನೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪರಿಹರಿಸಲು ಮನವಿ-ಮಾತುಕತೆ ಮೂಲಕ ನಡೆಸುತ್ತಾ ಬಂದ ಪ್ರಯತ್ನ ವಿಫಲವಾದಲ್ಲಿ ಬೀದಿಗಿಳಿದು ಜನರ ಜೊತೆ ಸೇರಿ ಹೋರಾಟ ನಡೆಸುವುದು ಅನಿವಾರ್ಯವಾಗಬಹುದು ಎಂದು ಎಚ್ಚರಿಸಿದ್ದಾರೆ.
