ಬೆಂಗಳೂರು: ಕಳೆದ ಕೆಲ ತಿಂಗಳುಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದ ಕನ್ನಡದ ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ (76) ರವಿವಾರ ತಡರಾತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
1948ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಬ್ಯಾಂಕ್ ಜನಾರ್ಧನ್, ಬೆಂಗಳೂರಿನಲ್ಲಿಯೇ ತಮ್ಮ ಶಿಕ್ಷಣವನ್ನು ಪೂರೈಸಿದ್ದರು. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು, ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಸಿನಿಮಾ ಮಾತ್ರವಲ್ಲದೇ ಬ್ಯಾಂಕ್ ಜನಾರ್ಧನ್ ಅವರು ಕಿರುತೆರೆ ಹಾಗೂ ರಂಗಭೂಮಿಯಲ್ಲಿಯೂ ಕೂಡ ತಮ್ಮ ಛಾಪನ್ನು ಮೂಡಿಸಿದ್ದು, ಹಾಸ್ಯ ನಟರಾಗಿ ಸಾಕಷ್ಟು ಪಾತ್ರಗಳನ್ನು ಮಾಡಿದ್ದರು. ಉಪೇಂದ್ರ ನಿರ್ದೇಶನದ ಶ್, ಕೌರವ ಸೇರಿದಂತೆ ಹಲವು ಸಿನಿಮಾ ಹಾಗೂ ಜೋಕಾಲಿ, ಮಾಂಗಲ್ಯದಂತಹ ಧಾರವಾಹಿಗಳಲ್ಲೂ ಕೂಡ ನಟಿಸಿ ಮನೆಮಾತಾಗಿದ್ದರು.
ಇನ್ನು, ಸುಲ್ತಾನ್ ಪಾಳ್ಯದ ನಿವಾಸದಲ್ಲಿರುವ ಬ್ಯಾಂಕ್ ಜನಾರ್ಧನ್ ಅವರ ನಿವಾಸಲದಲಿ ಅವರ ಪಾರ್ಥಿವ ಶರೀರವನ್ನು ಇಡಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
