
ಬೆಂಗಳೂರು: ರಾಜ್ಯದಲ್ಲಿ ಕಾವೇರಿ ವಿವಾದ ಭುಗಿಲೆದ್ದಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಬಿಡುವುದನ್ನು ವಿರೋಧಿಸಿ ಕರವೇ ಕಾರ್ಯಕರ್ತರು, ಅನೇಕ ರೈತ ಸಂಘಟನೆಗಳು ಇಂದು ಕರ್ನಾಟಕ ಬಂದ್ ಗೆ ಕರೆಕೊಟ್ಟಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಬಂದ್ ಗೆ ಹಲವು ಜಿಲ್ಲೆ ಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರೆ ಇನ್ನು ಕೆಲವು ಜಿಲ್ಲೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿವೆ. ಹಾಗಾದ್ರೆ ಯಾವ ಜಿಲ್ಲೆಯಲ್ಲಿ ಹೇಗೆ ಬಂದ್ ಇರಲಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.
ಕರ್ನಾಟಕ ಬಂದ್ ಹಿನ್ನೆಲೆ ಹಲವೆಡೆ ಶಾಲಾ-ಕಾಲೇಜಿಗೆ ರಜೆ ನೀಡಿದ್ದು, ಇನ್ನೂ ಹಲವೆಡೆ ರಜೆ ಘೋಷಣೆ ಮಾಡಿಲ್ಲ. ರಜೆ ನೀಡುವ ಅಧಿಕಾರವನ್ನು ಶಿಕ್ಷಣ ಇಲಾಖೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡಿದ್ದು, ಬೆಂಗಳೂರು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜಗಳಿಗೆ ರಜೆ ಘೋಷಣೆ ಮಾಡಿ ಅಲ್ಲಿನ ಡಿಸಿ ಕೆ.ಎ.ದಯಾನಂದ ಆದೇಶ ಹೊರಡಿಸಿದ್ದಾರೆ. ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಶಾಲಾ-ಕಾಲೇಜಿಗೂ ಕೂಡ ರಜೆ ಘೋಷಿಸಲಾಗಿದ್ದು, ಮಂಡ್ಯ, ಮೈಸೂರು ಜಿಲ್ಲೆಯಲ್ಲೂ ಕೂಡ ಮುಂಜಾಗ್ರತಾ ಕ್ರಮವಾಗಿ ರಜೆ ನೀಡಲಾಗಿದೆ. ಇನ್ನು, ದಾವಣಗೆರೆ , ಚಾಮರಾಜ ನಗರದಲ್ಲೂ ಕೂಡ ರಜೆ ನೀಡಲಾಗಿದ್ದು, ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿಲ್ಲ.
ಇನ್ನು ಬಂದ್ ಹಿನ್ನೆಲೆ ರಾಜ್ಯಾದ್ಯಂತ ಚಿತ್ರ ಪ್ರದರ್ಶನ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಓಲಾ, ಊಬರ್, ಆಟೋ ಸೇವೆ ಇಲ್ಲ. ಶಾಪಿಂಗ್ ಮಾಲ್ ಬಂದ್ ಇರಲಿದೆ. ಏರ್ ಪೋರ್ಟ್ ಟ್ಯಾಕ್ಸಿ ಚಾಲಕ ಸಂಘ, ಖಾಸಗಿ ಸಾರಿಗೆ ಸಂಘಟನೆ, ಬಿಬಿಎಂಪಿ ನೌಕರರ ಸಂಘ, ಶಾಲಾ ಸಂಘಟನೆಗಳಾದ ರುಪ್ಸ, ಕ್ಯಾಮ್ಸ್, ಬಾರ್ ಆಂಡ್ ರೆಸ್ಟುರೆಂಟ್ ಅಸೋಸಿಯೇಶನ್ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದೆ.
ಸಾರಿಗೆ ಬಸ್‌ಗಳ ಸಂಚಾರ ಎಂದಿನಂತೆ ಇರಲಿದೆ. ವೈದ್ಯಕೀಯ ಸೇವೆ ಮೆಡಿಕಲ್ ಶಾಪ್‌ಗಳು ಎಂದಿನಂತೆ ಕಾರ್ಯನಿವಹಿಸಲಿದೆ. ಬ್ಯಾಂಕ್, ಪೆಟ್ರೋಲ್ ಬಂಕ್, ಸೇರಿದಂತೆ ತುರ್ತುಸೇವೆಗೆ ಸಂಬಂಧಿಸಿದ ಎಲ್ಲಾ ಸೇವೆಗಳು ಲಭ್ಯವಾಗಲಿದೆ.
