ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ತಾವು ಚುನಾವಣಾ ಪೂರ್ವದಲ್ಲಿ ನೀಡಿದ್ದಂತಹ ಭರವಸೆಗಳನ್ನು ಈಡೇರಿಸುವಲ್ಲಿ ಕಾರ್ಯನಿರತವಾಗಿದೆ. ಈ ಹಿನ್ನೆಲೆ 5ಗ್ಯಾರಂಟಿಗಳ ಯೋಜನೆಯನ್ನು ಜಾರಿಗೆ ತಂದು ಅದರ ಸೌಲಭ್ಯ ಪಡೆಯಲು ಮಾರ್ಗಸೂಚಿಗಳನ್ನು ಸರ್ಕಾರ ಪ್ರಕಟಿಸಿದೆ. ಇದೀಗ ಗೃಹಲಕ್ಷ್ಮೀ ಯೋಜನೆಯ ಮಾರ್ಗಸೂಚಿ ಪ್ರಕಟವಾಗಿದ್ದು, ಮನೆಯ ಯಜಮಾನಿಗೆ ಪ್ರತಿ ತಿಂಗಳು 2000ರೂ ದೊರಕುವ ಯೋಜನೆ ಸಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿಯನ್ವಯ ಗೃಹಲಕ್ಷ್ಮೀ ಯೋಜನೆ ಸೌಲಭ್ಯ ಪಡೆಯುವ ಮಹಿಳೆಯು ಈ ನಿಯಮಗಳ ಅನ್ವಯ ಯೋಜನೆಯನ್ನು ಪಡೆಯಬಹುದಾಗಿದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿ ಹೊಂದಿರುವವರು ಈ ಯೋಜನೆಯನ್ನು ಪಡೆಯಬಹುದಾಗಿದೆ. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ, ಒಂದು ಮಹಿಳೆಗೆ ಮಾತ್ರ ಯೋಜನೆ ಪ್ರಯೋಜನ ಪಡೆಯಬಹುದಾಗಿದೆ. ಈ ಯೋಜನೆಯ ಸೌಲಭ್ಯವನ್ನು ಪಡೆಯಲು 2023ರ ಜೂನ್ 15 ರಿಂದ ಜುಲೈ 15ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15ರಂದು ಅವರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಈ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಗಳನ್ನು ಜೋಡಣೆ ಮಾಡಬೇಕಾಗುತ್ತದೆ.
