
ಉಡುಪಿ: ನ್ಯಾಯಾಲಯಕ್ಕೆ ನಕಲಿ ಆಧಾರ್ ಕಾರ್ಡ್ ನೀಡಿದ ಘಟನೆಗೆ ಸಂಬಂಧಿಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನಿಗೆ ಅರ್ಜಿ ಸಲ್ಲಿಸುವ ವೇಳೆ ನ್ಯಾಯಾಲಯಕ್ಕೆ ನಕಲಿ ಆಧಾರ್ ಕಾರ್ಡ್ ಸಲ್ಲಿಸಲಾಗಿದೆ.
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣವೊಂದು ದಾಖಲಾಗಿತ್ತು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯ, ಎಫ್.ಟಿ.ಎಸ್.ಸಿ-1,ರಲ್ಲಿ ವಿಚಾರಣೆ ಹಂತದಲ್ಲಿತ್ತು. ಡಿ. 7ರಂದು ಈ ಪ್ರಕರಣದ ವಿಚಾರಣೆಯ ಸಮಯ ಇಬ್ರಾಹಿಂ ಎಂ.ಐ. ಮತ್ತು ಎ.ಕೆ. ಹಮೀದ್ ನ್ಯಾಯಾಲಯದ ಮುಂದೆ ಹಾಜರಾಗಿ ಪ್ರಕರಣದಲ್ಲಿನ ಆರೋಪಿಗಳ ಪರ ಜಾಮೀನು ನೀಡಲು ಆಧಾರ್ ಕಾರ್ಡ್ ಅನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಇವರುಗಳು ಈಗಾಗಲೇ ವಿವಿಧ ನ್ಯಾಯಾಲಯಗಳಲ್ಲಿ ಹಾಜರುಪಡಿಸಿದ್ದ ಆಧಾರ್ ಕಾರ್ಡ್‌ಗಳನ್ನು ಹಾಗೂ ಈ ದಿನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿದಾಗ ಸಾಮ್ಯತೆ ಇಲ್ಲದೇ ಇರುವುದು ಕಂಡುಬಂದಿತ್ತು. ಕೋರ್ಟಿಗೆ ಮೋಸ ಮಾಡುವ ದುರುದ್ದೇಶದಿಂದ ಆಧಾರ್ ಕಾರ್ಡ್ ಫೋರ್ಜರಿ ಮಾಡಿರುವುದು ಗೊತ್ತಾಗಿದೆ.
ಈ ಸಂಬಂಧ ಜಿಲ್ಲಾನ್ಯಾಯಾಲಯದ ಮುಖ್ಯ ಕಾರ್ಯನಿರ್ವಾಹಕ ಅಬ್ಟಾಸ್ ಎಸ್. ಅವರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.
