
ಮಂಗಳೂರು: ಸಾಮಾನ್ಯವಾಗಿ ಮನುಷ್ಯರಿಗೆ ಶಸ್ತ್ರಚಿಕಿತ್ಸೆ ಮಾಡುವುದು ಅದರಲ್ಲಿ ನಾನಾ ರೀತಿಯ ಸಂಶೋಧನೆಗಳನ್ನು ಮಾಡಿ ಯಶಸ್ವಿಯಾಗಿ ಸಾಧನೆ ಮಾಡುವುದನ್ನು ನಾವು ಕೇಳಿರತ್ತೇವೆ. ಆದರೆ ಇಲ್ಲೊಂದು ಕಡೆ ಹೆಬ್ಬಾವಿಗೆ ಆಪರೇಷನ್ ಮಾಡಿ ಸಕ್ಸಸ್ ಆಗಿ ವೈದ್ಯರ ತಂಡವೊಂದು ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು, ಮಂಗಳೂರಿನ ಕದ್ರಿ ಎಂಬಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ 13 ಕೆಜಿ ತೂಕದ ಹೆಬ್ಬಾವನ್ನು ಉರಗ ತಜ್ಞ ಧೀರಜ್ ಗಾಣಿಗ ಎಂಬುವವರು ವೈದ್ಯರಲ್ಲಿಗೆ ತಂದಿದ್ದರು. ಸ್ಕ್ಯಾನ್ ಮಾಡಿದ ನೋಡಿದಾಗ ಹಾವಿನ ಹೊಟ್ಟೆಯಲ್ಲಿ ಮಲ ತುಂಬಿರುವುದು ಪತ್ತೆಯಾಗಿರುವುದನ್ನು ಕಂಡುಕೊಂಡ ವೈದ್ಯರು ಸತತ ಮೂರು ತಾಸುಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ, ಹಾವಿನ ಹೊಟ್ಟೆಯಲ್ಲಿದ್ದ ಮಲವನ್ನು ಹೊರತೆಗೆದಿದ್ದಾರೆ.
ಶಸ್ತ್ರ ಚಿಕಿತ್ಸೆ ಬಳಿಕ ಹೆಬ್ಬಾವು ಚೇತರಿಸಿಕೊಂಡಿದ್ದು, ಹೆಬ್ಬಾವನ್ನು ಮರಳಿ ಕಾಡಿಗೆ ಬಿಡಲಾಗಿದೆ. ಹೆಬ್ಬಾವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ ಹೆಗ್ಗಳಿಕೆ ಡಾ.ಮೇಘನಾ ಪೆಮ್ಮಯ್ಯ, ಡಾ.ಯಶಸ್ವಿ ನಾರಾವಿ, ಡಾ.ಕೀತನಾ ಜೋಷಿ, ನಫೀಸಾ ಕೌಸರ್ ಹಾಗೂ ಸಮೀಕ್ಷಾ ರೆಡ್ಡಿ ತಂಡಕ್ಕೆ ಸಲ್ಲುತ್ತದೆ.
