
ಉಡುಪಿ: ಏಕ ವಿನ್ಯಾಸ ನಕ್ಷೆ ಪಡೆಯಲು ಸರಕಾರ ಹೊರಡಿಸಿದ ಹೊಸ ಆದೇಶವನ್ನು ಹಿಂಪಡೆದು ಸ್ಥಳೀಯ ಮಟ್ಟದಲ್ಲಿ ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸದನದಲ್ಲಿ ವಿ ಸುನಿಲ್ ಕುಮಾರ್ ಮನವಿ ಮಾಡಿದ್ದಾರೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 01.00 ಎಕ್ರೆ ವರೆಗಿನ ಏಕ ನಿವೇಶನ ವಿನ್ಯಾಸಗಳಿಗೆ ಅನುಮೋದನೆ ನೀಡುವ ಕುರಿತು ಈ ಹಿಂದೆ ಇದ್ದ ಕಾರ್ಯ ವಿಧಾನವನ್ನು ಈಗಿನ ಸರ್ಕಾರ ತಿದ್ದುಪಡಿ ಮಾಡಿ ಈ ಮೊದಲು ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಗೆ ಇದ್ದ ಅಧಿಕಾರವನ್ನು ಮೊಟಕುಗೊಳಿಸಿ ಯೋಜನಾ ಪ್ರಾಧಿಕಾರಕ್ಕೆ ನೀಡಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ಅತ್ಯಂತ ತೊಂದರೆಯಾಗುತ್ತಿದೆ.
ಅಷ್ಟು ಮಾತ್ರವಲ್ಲದೆ ಗ್ರಾಮಾಂತರ ಭಾಗದ ಜನರು ಇದಕ್ಕಾಗಿ ದೂರದ ನಗರ ಪ್ರದೇಶಗಳಿಗೆ ಅಲೆದಾಡುವಂತಾಗಿದೆ ಹಾಗೂ ಇದರ ಕುರಿತು ದಿನಪ್ರತಿ ಸಾರ್ವಜನಿಕರಿಂದ ಅನೇಕ ದೂರುಗಳು ಬರುತ್ತಿದೆ ಎಂದು ವಿಧಾನಸಭಾ ಕಲಾಪದಲ್ಲಿ ಸುನಿಲ್ ಕುಮಾರ್ ಪ್ರಸ್ತಾಪ ಮಾಡಿದ್ದಾರೆ.
ಪ್ರಾಧಿಕಾರವು ನಗರ ಪ್ರದೇಶಕ್ಕೆ ಸೀಮಿತವಾಗಿರುವುದರಿಂದ ನಮ್ಮ ಕಾರ್ಕಳ ಗ್ರಾಮೀಣ ಭಾಗದ ಜನರು ಏಕ ವಿನ್ಯಾಸ ನಕ್ಷೆ 9/11 ಪಡೆಯಲು ಕಾಪು ಪುರಸಭೆ ಕಚೇರಿಗೆ ಹೋಗಬೇಕಾಗಿರುವುದು ಈಗ ಅನಿವಾರ್ಯವಾಗಿದೆ.
ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿಗಳ ಕೊರತೆಯು ಇರುವುದರಿಂದ ಯಾವುದೇ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಮನಗಂಡು ಕಾರ್ಕಳ ಶಾಸಕರಾದ ವಿ ಸುನಿಲ್ ಕುಮಾರ್ ರವರು ಈ ಹಿಂದೆಯೇ ಸರ್ಕಾರದ ಗಮನಕ್ಕೆ ತಂದಿದ್ದರು.
ಉನ್ನತ ಮಟ್ಟದ ಅಧಿಕಾರಿಗಳು ನಮ್ಮ ಉಡುಪಿ ಜಿಲ್ಲೆಯ ಭೌಗೋಳಿಕ ಹಿನ್ನೆಲೆಯನ್ನು ಅದರ ವಾಸ್ತವವನ್ನು ಮನಗಂಡು ಉಡುಪಿಯಲ್ಲಿಯೇ ಸಭೆ ನಡೆಸಬೇಕು ಹಾಗೂ ಏಕ ವಿನ್ಯಾಸ ನಕ್ಷೆ, 9/11 ಪಡೆಯಲು ಈ ಹಿಂದೆ ಇದ್ದಂತೆ ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಗಳಲ್ಲಿ ಅನುಮೋದಿಸಲು ಅವಕಾಶ ಕಲ್ಪಿಸಿ ಗ್ರಾಮೀಣ ಭಾಗದ ಜನರಿಗೆ ಮನೆ ಕಟ್ಟಲು ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಜೊತೆಗೆ ಪ್ರಸ್ತುತ ಸರಕಾರ ಹೊರಡಿಸಿದಂತಹ ಆದೇಶವನ್ನು ಹಿಂಪಡೆಯಬೇಕು ಎಂದು ಸದನದಲ್ಲಿ ಸಂಬಂಧಪಟ್ಟ ಸಚಿವರರಲ್ಲಿ ಮನವಿ ಮಾಡಿದ್ದಾರೆ.
ಪ್ರಸ್ತುತ ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು ಅಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಸರಕಾರದ ಗಮನಕ್ಕೆ ತಂದಿದ್ದಾರೆ.
ವಿ ಸುನಿಲ್ ಕುಮಾರ್ ಮನವಿಗೆ ಸ್ಪಂದಿಸಿದ ಸಚಿವರು ಅಧಿವೇಶನದ ನಂತರ ಎರಡು ಜಿಲ್ಲೆಯ ಎಲ್ಲಾ ಶಾಸಕರನ್ನು ಸೇರಿಸಿಕೊಂಡು ಅಲ್ಲೇ ಈ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
