ಉಡುಪಿ: ಅಡಿಕೆ ಕೃಷಿಯಲ್ಲಿ ಎಲೆಚುಕ್ಕೆ/ಹಳದಿ ಎಲೆ ರೋಗ ತಡೆಗೆ ಸಂಬಂಧಿಸಿ 225 ಕೋಟಿ ರೂ.ಗಳ ಪರಿಹಾರ ಒದಗಿಸುವಂತೆ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆ (ಸಿಪಿಸಿಆರ್‌ಐ)ಯ ಮೂಲಕ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಉಡುಪಿ, ದಕ್ಷಿಣ ಕನ್ನಡ ಸೇರಿ ರಾಜ್ಯದ ಅಡಿಕೆ ಬೆಳೆಯುವ ಪ್ರಮುಖ 7 ಜಿಲ್ಲೆಗಳ 53,997 ಹೆಕ್ಟೇರ್ ಪ್ರದೇಶ ದಲ್ಲಿ ರೋಗ ಕಾಣಿಸಿಕೊಂಡಿರುವುದು ಬೆಳೆಗಾರರಲ್ಲಿ ಇನ್ನಷ್ಟು ಆತಂಕ ಸೃಷ್ಟಿಸಿದೆ. ರೋಗ ಬಾಧಿತ ಗಿಡದ ಎಲೆ ಸಂಪೂರ್ಣ ಒಣಗಿ ಇಳುವರಿ ಕುಸಿಯುತ್ತಿದೆ.
ರೋಗ ನಿಯಂತ್ರಣಕ್ಕೆ ಕೇಂದ್ರ ಸರಕಾರ ನೇಮಿಸಿರುವ ವೈಜ್ಞಾನಿಕ ತಜ್ಞರನ್ನು ಒಳಗೊಂಡ ಸಮಿತಿಯು ಈಗಾಗಲೇ ಚಿಕ್ಕಮಗಳೂರು, ಶಿವಮೊಗ್ಗ, ದ.ಕ. ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಯ ಪರಿಹಾರಕ್ಕೆ ಕೆಲವು ಶಿಫಾರಸುಗಳನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದೆ.
ಎಲೆಚುಕ್ಕೆ ರೋಗ ಬಾಧೆಯು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತೀ ಹೆಚ್ಚಿದ್ದರೆ ಉಡುಪಿಯಲ್ಲಿ ಅತೀ ಕಡಿಮೆಯಿದೆ.
ಸಮಿತಿಯ ಶಿಫಾರಸಿನಂತೆ ಫೈಟೋಸ್ಯಾನಿಟರಿ ಕ್ರಮಗಳ ಅಳವಡಿಕೆ, ಪೋಷಕಾಂಶ ನಿರ್ವಹಣೆ, ಸಸ್ಯ ಸಂರಕ್ಷಣೆ ಕ್ರಮಗಳ ಅಳವಡಿಕೆ ಹಾಗೂ ತಾಂತ್ರಿಕ ಮಾಹಿತಿ ಕುರಿತು ಬೆಳೆಗಾರರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ.
