
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದಂತಹ ಭರವಸೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ದೊರೆತಿದ್ದು, ಇದರಿಂದ ಆಟೋ ಚಾಲಕರಿಗೆ, ಖಾಸಗಿ ಬಸ್ ನವರಿಗೆ ರೈಲ್ವೆ ಸಾರಿಗೆ ಎಲ್ಲದಕ್ಕೂ ಹೊಡೆತಬಿದ್ದಿದ್ದು, ಈ ಯೋಜನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಇದೀಗ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು ಸರ್ವರ್ ಸಮಸ್ಯೆ ಎದುರಾಗಿದ್ದು, ಪ್ರಯಾಣಿಕರಿಗೆ ಇರಿಸುಮುರಿಸು ಉಂಟಾಗಿದೆ.
ಹೌದು, ಶಕ್ತಿ ಯೋಜನೆ ಚಾಲನೆ ನೀಡಿದ ಬಳಿಕ ಮಹಿಳೆಯರಿಗೆ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಮಾಡುವ ಅವಕಾಶವನ್ನೂ ಕೂಡ ಮಾಡಲಾಗಿದೆ. ಹೀಗಾಗಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಲು ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು ಮುಗಿ ಬೀಳುತ್ತಿರುವುದರಿಂದ ಸರ್ವರ್ ಡೌನ್ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಎಸ್‌ಆರ್‌ಟಿಸಿ, ಟೆಕ್ನಿಕಲ್ ಸಮಸ್ಯೆಯಿಂದ ಹೀಗಾಗಿದೆ ಎಂದು ಹೇಳಿದ್ದಾರೆ.
