ಮಂಗಳೂರು: ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ ಮೀನುಗಾರಿಕಾ ಬೋಟೊಂದು ಸಂಪೂರ್ಣವಾಗಿ ಸುಟ್ಟುಕರಕಲಾಗಿ, ಕೋಟ್ಯಾಂತರ ಮೌಲ್ಯದ ವಸ್ತು ನಾಶವಾಗಿರುವ ಘಟನೆ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಬೆಂಗ್ರೆ ಮೀನುಗಾರಿಕಾ ಬಂದರಿನಲ್ಲಿ ನಡೆದಿದೆ.
ಇಂದು ಮುಂಜಾನೆ ಸುಮಾರು 4:30ಕ್ಕೆ ಬೆಂಕಿ ಅವಘಢ ಸಂಭವಿಸಿದ್ದು. ಬೋಟಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು, ಮುನ್ನೆಚ್ಚರಿಕಾ ಕ್ರಮವಾಗಿ ಬಂದರಿನಲ್ಲಿ ಲಂಗರು ಹಾಕಿರುವ ಇನ್ನಷ್ಟು ಬೋಟ್ ಗಳಿಗೆ ಬೆಂಕಿ ಹರಡಬಹುದೆಂದು ಕೂಡಲೇ ಬೆಂಕಿ ತಗುಲಿದ ಬೋಟನ್ನು ಬಂದರಿನಿಂದ ನದಿ ಕಡೆಗೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಸಂಭವಿಸಬೇಕಿದ್ದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಅರುಣ್ ಎಂಬುವವರಿಗೆ ಸೇರಿದ ಬೋಟು ಇದಾಗಿದ್ದು, ಸ್ಥಳಕ್ಕಾಗಮಿಸಿದ ಪಾಂಡೇಶ್ವರ ಹಾಗೂ ಕದ್ರಿ ಅಗ್ನಿ ಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.
