
5 ಗ್ಯಾರಂಟಿಗಳ ಆಮಿಷಗಳನ್ನೊಡ್ಡುವ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಭರವಸೆಗಳನ್ನು ನೀಡುವ ಮೂಲಕ ಚುನಾವಣೆಯಲ್ಲಿ ಗೆದ್ದಿದೆ. ಆದರೆ ಈ ಯೋಜನೆಗಳನ್ನು ಯಥಾವತ್ತಾಗಿ ಜಾರಿಗೆ ತಾರದೆ ಜನತೆಗೆ ಮೋಸ ಎಸಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಚುನಾವಣಾ ಪೂರ್ವದಲ್ಲಿ ಬೇಕಾಬಿಟ್ಟಿ ಗ್ಯಾರಂಟಿಗಳನ್ನು ಘೋಷಿಸಿರುವ ಕಾಂಗ್ರೆಸ್ಸಿಗೆ ಅಧಿಕಾರ ದೊರೆತ ಬಳಿಕ ಈ ಉಚಿತ ಗ್ಯಾರಂಟಿಗಳು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅಲ್ಲದೇ ‘ನನಗೂ ಫ್ರೀ ನಿನಗೂ ಫ್ರೀ’ ‘ಹತ್ತು ಕೆ.ಜಿ. ಅಕ್ಕಿ ಬೇಕಾ ಬೇಡ್ವಾ’ ಎಂದು ಕಾಂಗ್ರೆಸ್ ಮುಖಂಡರು ಪುಂಖಾನುಪುಂಖವಾಗಿ ಉಚಿತ ಗ್ಯಾರಂಟಿಗಳ ಬಗ್ಗೆ ಪುಂಗಿ ಊದಿರುವುದು ಕೇವಲ ಚುನಾವಣಾ ಗಿಮಿಕ್ ಎಂಬುದು ಇದೀಗ ಸಾಬೀತಾಗಿದೆ ಎಂದು ಹೇಳೀದರು.
ಸರಕಾರದ 5 ಗ್ಯಾರಂಟಿ ಯೋಜನೆ ಜಾರಿ ಬಳಿಕ ಬಿಜೆಪಿ ಜನರಲ್ಲಿ ಗೊಂದಲ ಮೂಡಿಸುತ್ತಿದೆ ಎಂಬ ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ಅವರ ಹೇಳಿಕೆಗೆ ಪ್ರತಕ್ರಿಯಿಸಿ, ಅರೆಬೆಂದ ಗ್ಯಾರಂಟಿಗಳ ನಡುವೆ ಗೊಂದಲದ ಗೂಡಾಗಿರುವ ಕಾಂಗ್ರೆಸ್ ಸರಕಾರ ಉಚಿತ ಗ್ಯಾರಂಟಿಗಳ ಜಾರಿಗೆ ದಿನಕ್ಕೊಂದು ಷರತ್ತುಗಳನ್ನು ಹಾಕುತ್ತಾ ಜನತೆಯಲ್ಲಿ ಆತಂಕ ಮತ್ತು ಗೊಂದಲವನ್ನು ಸೃಷ್ಠಿಸಿದೆ. ಸರಕಾರದ ಮೇಲೆ ವಿಶ್ವಾಸ ಕಳೆದುಕೊಂಡಿರುವ ಜನತೆ ತಾಳ್ಮೆ ಕಳೆದುಕೊಂಡು ಬೀದಿಗಿಳಿಯುವ ದಿನ ದೂರವಿಲ್ಲ ಎಂದಿದ್ದಾರೆ.
ಇನ್ನು, 200 ಯುನಿಟ್ ವಿದ್ಯುತ್ ಫ್ರೀ ಎಂದಿರುವ ಕಾಂಗ್ರೆಸ್ ಸರಕಾರ ಉಚಿತ ಗ್ಯಾರಂಟಿಗೆ ಹಲವಾರು ಷರತ್ತುಗಳನ್ನು ಹಾಕಿರುವ ಜೊತೆಗೆ ದಿಢೀರ್ ವಿದ್ಯುತ್ ದರವನ್ನು ಏರಿಸಿ ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ. ಗೃಹ ಲಕ್ಷ್ಮಿ ಗ್ಯಾರಂಟಿಯಡಿ ಮನೆಯೊಡತಿ ಯಾರು ಎಂಬ ವಿವಾದ ಸೃಷ್ಠಿಸಿರುವ ಕಾಂಗ್ರೆಸ್ ಸರಕಾರ, ಉಚಿತ ಅಕ್ಕಿ ಗ್ಯಾರಂಟಿ ಅನುಷ್ಠಾನಕ್ಕೆ ಹೆಚ್ಚುವರಿ ಅಕ್ಕಿಗಾಗಿ ಕೇಂದ್ರ ಸರಕಾರದ ಮೊರೆ ಹೋಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಗ್ಯಾರಂಟಿಯಡಿ ಸರಕಾರಿ ಬಸ್ ಗಳು ಯಥೇಚ್ಛವಾಗಿ ಇಲ್ಲದ ಜಿಲ್ಲೆಗಳಲ್ಲಿ ಪರ್ಯಾಯ ವ್ಯವಸ್ಥೆಯ ಬಗ್ಗೆ ಗಮನ ಹರಿಸದ ಕಾಂಗ್ರೆಸ್ ಸರಕಾರ, ಎಲ್ಲ ಪದವೀಧರ ನಿರುದ್ಯೋಗಿಗಳಿಗೆ ಮಾಸಾಶನ ನೀಡುವ ಮಾತನ್ನು ಮುರಿದು ಯುವ ಸಮುದಾಯಕ್ಕೆ ದ್ರೋಹ ಬಗೆದಿದೆ. ಇತ್ತ ಕಾಂಗ್ರೆಸ್ಸಿನ 5 ಉಚಿತ ಗ್ಯಾರಂಟಿಗಳೂ ಜಾರಿಯಾಗದೇ ಅತ್ತ ಅಭಿವೃದ್ಧಿ ಚಟುವಟಿಕೆಗಳೂ ನಡೆಯದೆ ರಾಜ್ಯ ದಿವಾಳಿತನದ ಅಂಚಿನತ್ತ ಸಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
