
ಕೊಲ್ಲೂರು: ತನ್ನ ಜಮೀನಿಗೆ ನುಗ್ಗಿದ ದನವನ್ನು ಗುಂಡಿಕ್ಕಿ ಸಾಯಿಸಿದ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಗ್ರಾಮದ ಅಂಗಡಿಬೆಟ್ಟು ಎಂಬಲ್ಲಿ ನಡೆದಿದೆ.
ದನವನ್ನು ಗುಂಡಿಕ್ಕಿ ಸಾಯಿಸಿರುವ ವ್ಯಕ್ತಿಯನ್ನು ನರಸಿಂಹ ಎಂದು ಗುರುತಿಸಲಾಗಿದೆ. ಈತನ ಗದ್ದೆಗೆ ಪಕ್ಕದ ಮನೆಯ ಗುಲಾಬಿ ಎಂಬುವವರ ದನ ಹೋಗಿದ್ದ ಹಿನ್ನೆಲೆ ಆತ ಕೋವಿಯಿಂದ ದನವನ್ನು ಗುಂಡಿಕ್ಕಿ ಸಾಯಿಸಿದ್ದಾನೆ. ಇದನ್ನು ವಿಚಾರಿಸಲು ಹೋಗಿದ್ದ ವೇಳೆ ನರಸಿಂಹ ಗುಲಾಬಿ ಮತ್ತು ಅವರ ಮನೆಯವರಿಗೂ ಕೋವಿ ತೋರಿಸಿ ಬೆದರಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ತಾನು 20 ಕ್ಕೂ ಹೆಚ್ಚು ದನಗಳಿಗೆ ಗುಂಡಿಕ್ಕಿದ್ದೇನೆ, ಅದೇ ರೀತಿ ನಿಮಗೂ ಗುಂಡು ಹಾರಿಸುತ್ತೇನೆ ಎಂದು ಹೆದರಿಸಿದ್ದಾನೆ ಎಂದು ಹೇಳಲಾಗಿದೆ.
ಇನ್ನು, ಕೊಲ್ಲೂರು ಸಮೀಪದ ಈ ಪರಿಸರದಲ್ಲಿ ನಾಲ್ಕು ದನಗಳು ಗುಂಡೇಟಿನಿಂದ ಸತ್ತಿದ್ದು, 14 ದನಗಳು ಗುಂಡೇಟಿನಿಂದ ಗಾಯಗೊಂಡಿವೆ. ಇದಕ್ಕೆ ನರಸಿಂಹ ಎಂಬಾತನೇ ಕಾರಣ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಗುಲಾಬಿಯವರು ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
