
ನವದೆಹಲಿ: ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ಈಗಾಗಲೇ ತೆರೆಗೆ ಅಪ್ಪಳಿಸಿದ್ದು, ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಸಿನಿಮಾದ ವಿರುದ್ಧ ಅನೇಕ ಆಕ್ರೋಶಗಳು ಕೇಳಿ ಬರುತ್ತಿದೆ. ಸಿನಿಮಾದ ಸಂಭಾಷಣೆಯಲ್ಲಿ ಸಾಕಷ್ಟು ಬದಲಾವಣೆಯಾಗಬೇಕು ಎನ್ನುವ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ನಡುವೆ ಸಿನಿಮಾದ ಸಹಬರಹಗಾರ ನೀಡಿರುವ ಹೇಳಿಕೆಯೊಂದು ಇದೀಗ ವಿವಾದಕ್ಕೀಡಾಗಿದೆ.
ಹೌದು, ಈಗಾಗಲೇ ಸಾಕಷ್ಟು ಟ್ರೋಲ್ ಗೆ ಒಳಗಾಗುವುದರ ಜೊತೆಗೆ ಜನರ ಕಂಗೆಣ್ಣಿಗೆ ಗುರಿಯಾಗಿರುವ ಆದಿಪುರುಷ್ ಸಿನಿಮಾಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸಿನಿಮಾದ ಸಹಬರಹಗಾರ ಹಾಗೂ ಹಾಡುಗಳನ್ನು ಬರೆದಿರುವ ಮನೋಜ್ ಮುಂತಾಶೀರ್ ಆಜ್ ತಕ್ ಜೊತೆ ನಡೆದ ಸಂದರ್ಶನವೊಂದರಲ್ಲಿ, “ಹನುಮಂತ ಶ್ರೀರಾಮನ ಹಾಗೆ ಅಲ್ಲ. ಹನುಮಂತ ದೇವರಲ್ಲ, ಆತ ಓರ್ವ ಭಕ್ತ. ಆತನನ್ನು ನಾವು ದೇವರನ್ನಾಗಿ ಮಾಡಿದೆವು. ಏಕೆಂದರೆ ಆತನ ಭಕ್ತಿ ಅಂತಹ ಶಕ್ತಿಯನ್ನು ಹೊಂದಿತ್ತು”. ಎಂದು ಹನುಮಂತನ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಈ ಬಗ್ಗೆ ಕಿಡಿಕಾರಿರುವ ನೆಟ್ಟಿಗರು, ಇಂತಹ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಇನ್ನು, ಇತ್ತೀಚೆಗೆ ಸಿನಿಮಾ ಬ್ಯಾನ್‌ಮಾಡುವಂತೆ ಆಲ್‌ಇಂಡಿಯಾ ಸಿನಿ ವರ್ಕರ್ ಅಸೋಸಿಯೇಷನ್‌ಪತ್ರದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿತ್ತು. ಈ ಬಗ್ಗೆ ಪತ್ರ ಬರೆದಿರುವ ಅವರು, ಸಿನಿಮಾದಲ್ಲಿ ವಿವಾದ ಹುಟ್ಟು ಹಾಕುವಂಥ ಸಾಕಷ್ಟು ಸನ್ನಿವೇಶಗಳಿವೆ. ಕಥೆಯನ್ನು ಮನಸ್ಸಿಗೆ ಬಂದಂತೆ ಕಟ್ಟಿಕೊಡಲಾಗಿದೆ. ಈ ಚಿತ್ರದ ಸಂಭಾಷಣೆ ಎಲ್ಲರಿಗೂ ನೋವನ್ನುಂಟು ಮಾಡಿದೆ. ಈ ಹಿನ್ನೆಲೆ ಸಿನಿಮಾವನ್ನು ಥಿಯೇಟರ್‌ಹಾಗೂ ಒಟಿಟಿ ಎರಡಲ್ಲೂ ಪ್ರಸಾರ ಮಾಡದಂತೆ ಬ್ಯಾನ್‌ಮಾಡಬೇಕು ಎಂದಿದ್ದಾರೆ.
