Home Uncategorized ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆ ಜಾರಿ ಸಮರ್ಪಕವಾಗಿರಲಿ: ಕೋಟ ಶ್ರೀನಿವಾಸ್ ಪೂಜಾರಿ

ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆ ಜಾರಿ ಸಮರ್ಪಕವಾಗಿರಲಿ: ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ: ಸಮಾಜದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಇರುವ ಅಸಮಾನತೆಯನ್ನು ಹೋಗಲಾಡಿಸುವ ಉದ್ದೇಶದಿಂದ ‘ಬೇಟಿ ಬಚಾವೊ ಬೇಟಿ ಪಡಾವೊ’ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಡಾ. ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಧಿಕಾರಿಗಳಿಗೆ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ, ಅವರು ಗೌರವಯುತವಾಗಿ ಜೀವನ ನಡೆಸಲು ಅನುಕೂಲವಾಗುವಂತೆ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.

ಸಾಮಾಜಿಕ ಪಿಡುಗಾದ ಜೀತ ಪದ್ಧತಿಯನ್ನು ನಾಗರಿಕ ಸಮಾಜದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಹಾಗೂ ಪ್ರತಿಯೊಬ್ಬರೂ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸಲು ಸಂಬಂಧಪಟ್ಟ ಅನುಷ್ಠಾನಾಧಿಕಾರಿಗಳು ಅಗತ್ಯ ಸಹಕಾರ ನೀಡಬೇಕು ಎಂದರು.

ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಮಾತನಾಡಿ, ಲಿಂಗಾನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಇಂದಿಗೂ ಇಳಿಮುಖವಾಗುತ್ತಿದ್ದು, ಜಿಲ್ಲೆಯಲ್ಲಿ ಸದ್ಯದ ಪರಿಸ್ಥಿತಿ ಆಶಾದಾಯಕವಾಗಿದೆ. ಗಂಡು ಮಕ್ಕಳಿಗೆ ಸರಿಸಮಾನವಾಗಿ ಹೆಣ್ಣು ಮಕ್ಕಳನ್ನು ಬೆಳೆಸಬೇಕು. ಹೆಣ್ಣು ಮಕ್ಕಳಿಗೆ ಅನುಕಂಪ ತೋರದೇ ಅವರಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅವಕಾಶ ನೀಡುವುದರೊಂದಿಗೆ ಸಮಾನತೆ ಕಲ್ಪಿಸಬೇಕು ಎಂದು ಹೇಳಿದರು.

ಪಟಾಕಿ ತಯಾರಿಕೆ, ಕಲ್ಲು ಕೋರೆ ಸೇರಿದಂತೆ ಅಪಾಯಕಾರಿ ಕೆಲಸಗಳಿಗೆ ಚಿಕ್ಕಮಕ್ಕಳನ್ನು ನಿಯೋಜಿಸುವುದು ಕಾನೂನು ಬಾಹಿರವಾಗಿದ್ದು, ಮಕ್ಕಳು ತಮ್ಮ ಬಾಲ್ಯವನ್ನು ಅನುಭವಿಸಲು, ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದರು.

ವೈಕುಂಠ ಬಾಳಿಗಾ ಕಾನೂನು ವಿದ್ಯಾಲಯದ ನಿರ್ದೇಶಕಿ ನಿರ್ಮಲಾ ಕುಮಾರಿ, ವಕೀಲ ಪ್ರದೀಪ್ ಪಿ.ಜೆ ಹಾಗೂ ಉಪ ಕಾನೂನು ನೆರವು ಅಭಿರಕ್ಷಕ ಶ್ರೀನಿವಾಸ ಉಪಾಧ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿ ಡಿವೈಎಸ್‌ಪಿ ಡಿ.ಟಿ. ಪ್ರಭು, ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮ್ಮದ್ ಇದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ಪ್ರಸ್ತಾವಿಕವಾಗಿ ಮಾತನಾಡಿದರು. ದೀಪಾ ನಿರೂಪಿಸಿದರು. ಅನುರಾಧ ಹಾದಿಮನೆ ವಂದಿಸಿದರು.

 

 

 
Previous articleಸಪ್ತಪದಿ ತುಳಿದ ನಟ ಡಾಲಿ ಧನಂಜಯ್- ಡಾ. ಧನ್ಯತಾ
Next articleಮಂಗಳೂರು ಮಹಾನಗರ ಪಾಲಿಕೆಯಿಂಡ ಪಟ್ಲ ಫೌಂಡೇಶನ್ ಗೆ 10 ಲಕ್ಷ ರೂ ಪ್ರೋತ್ಸಾಹ ಧನ