Home Uncategorized ಫೆ. 28 ರಿಂದ ಮಾರ್ಚ್ 7 ರವರೆಗೆ ಇತಿಹಾಸ ಪ್ರಸಿದ್ದ ಪುತ್ತಿಗೆ ಸೋಮನಾಥೇಶ್ವರ ದೇವಳದ ಬ್ರಹ್ಮಕಲಶಾಭಿಷೇಕ

ಫೆ. 28 ರಿಂದ ಮಾರ್ಚ್ 7 ರವರೆಗೆ ಇತಿಹಾಸ ಪ್ರಸಿದ್ದ ಪುತ್ತಿಗೆ ಸೋಮನಾಥೇಶ್ವರ ದೇವಳದ ಬ್ರಹ್ಮಕಲಶಾಭಿಷೇಕ

ಮೂಡುಬಿದಿರೆ: ಎಂಟು ಶತಮಾನಗಳ ಹಿಂದಿನ ಪುರಾತನ ದೇಗುಲ ಹಾಗೂ ದಕ್ಷಿಣ ಕನ್ನಡದ ಅತಿ ದೊಡ್ಡ ದೇವಾಲಯವಾದ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಂದಾಜು ₹ 15 ಕೋಟಿ ವೆಚ್ಚದ ಜೀರ್ಣೋದ್ಧಾರ ಕಾರ್ಯಗಳು ಬಹುತೇಕ ಪೂರ್ಣಗೊಂಡಿದ್ದು, ಫೆಬ್ರವರಿ 28 ರಿಂದ ಮಾರ್ಚ್ 7 ರವರೆಗೆ ಬ್ರಹ್ಮಕಲಶಾಭಿಷೇಕ ಮತ್ತು ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮೂಲತಃ ಉಳ್ಳಾಲದ ಸೋಮನಾಥೇಶ್ವರ ವಂಶದ ಚೌಟ ಅರಸರು ವರದಾಯ ದೇವರಾಜ ಚೌಟರ ನೇತೃತ್ವದಲ್ಲಿ ಪುತ್ತಿಗೆಯಲ್ಲಿ (ಕೈರ್ಮಂಜ) ತಮ್ಮ ಆಳ್ವಿಕೆಯನ್ನು ಸ್ಥಾಪಿಸಿದ್ದು, ಅರಮನೆಯನ್ನು ನಿರ್ಮಿಸಿ ಉಳ್ಳಾಲದಿಂದ ಸೋಮನಾಥ ದೇವರ ಪ್ರಸಾದವನ್ನು ತರುವ ಪರಿಪಾಠಿ ಇದ್ದಿತ್ತು. ಆದರೆ ಪ್ರತಿಬಾರಿಯೂ ಪ್ರಸಾದವನ್ನು ಅಷ್ಟು ದೂರದಿಂದ ತರುವುದು ಕಷ್ಟಕರವಾದ ಕಾರಣ, ಎರಡನೇ ತಿರುಮಲರಾಯನು ಪುತ್ತಿಗೆಯಲ್ಲಿಯೇ ಸೋಮನಾಥೇಶ್ವರ ದೇವಾಲಯವನ್ನು ನಿರ್ಮಿಸಿದ್ದನು. ಕಾಲಾನಂತರದಲ್ಲಿ, ಚೌಟ ದೊರೆಗಳು ತಮ್ಮ ಆಡಳಿತ ಕೇಂದ್ರವನ್ನು ಮೂಡುಬಿದಿರೆಗೆ ಸ್ಥಳಾಂತರಿಸಿ ಅಲ್ಲಿ ಹೊಸ ಅರಮನೆಯನ್ನು ನಿರ್ಮಿಸಿದ್ದರು.

ಕಾಲನ ಪ್ರಭಾವದಿಂದ ದೇಗುಲವು ಶಿಠಿಲಗೊಂಡಿದ್ದು, ಸರ್ವಾನುಮತದಿಂದ ಜೀರ್ಣೋದ್ದಾರದ ನಿರ್ಣಯ ಕೈಗೊಳ್ಳಲಾಗಿತ್ತು. ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ನೇತೃತ್ವ ವಹಿಸಿರುವ ರಾಜಮನೆತನದ ಕುಲದೀಪ ಚೌಟರ ಪ್ರಕಾರ, ಈ ದೇವಾಲಯದ ಪ್ರಭಾವವು ಮೂಡುಬಿದಿರೆಯ ಆಚೆಗೂ ವ್ಯಾಪಿಸಿದ್ದು, 18 ಮಾಗಣೆಗಳನ್ನು ಹೊಂದಿದೆ. ಮಳಲಿ-ಪೊಳಲಿ, ಪೇಜಾವರ, ತಲಪಾಡಿ, ಉಳ್ಳಾಲ, ಸೋಮೇಶ್ವರ, ಅಮ್ಮೆಂಬಳ, ಬೆಳ್ಮ, ಕೈರಂಗಳ, ಬಾಳೆಪುಣಿ, ಮತ್ತು ಮುಂಡ್ಕೂರು ಸೇರಿದಂತೆ 77 ಗ್ರಾಮಗಳನ್ನು ಒಳಗೊಂಡಿದೆ.

ಇಲ್ಲಿನ ಪ್ರಧಾನ ದೇವತೆ ಸೋಮನಾಥೇಶ್ವರನ ಜೊತೆಗೆ ಮಹಿಷಮರ್ದಿನಿಯನ್ನು ಪೂಜಿಸಲಾಗುತ್ತದೆ. ದೇವಾಲಯದ ಸಂಕೀರ್ಣವು ಲಕ್ಷ್ಮೀ ನರಸಿಂಹ, ಚಂದ್ರನಾಥೇಶ್ವರ, ಪಂಚಧೂಮಾವತಿ ದೈವ, ಕರಿಯ ಮಲದೈವ ಮತ್ತು ರಕ್ತೇಶ್ವರಿ ಗುಡಿಗಳನ್ನು ಹೊಂದಿದೆ.

ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಮುಂಬರುವ ಬ್ರಹ್ಮಕಲಶಾಭಿಷೇಕದ ಮೇಲುಸ್ತುವಾರಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ (ಅಧ್ಯಕ್ಷರು), ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ (ಗೌರವಾಧ್ಯಕ್ಷರು) ಮುಂತಾದವರು ವಹಿಸಿಕೊಂಡಿದ್ದಾರೆ.

ದೇವಳದ ಆನುವಂಶಿಕ ಆಡಳಿತಾಧಿಕಾರಿ ಕುಲದೀಪ ಎಂ.ಚೌಟ ಅವರ ನೇತೃತ್ವದಲ್ಲಿ ಅವಧಾನಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಅವರ ವಾಸ್ತು ಮಾರ್ಗಸೂಚಿಯಂತೆ ದೇವಾಲಯದ ಪುನರ್ ನಿರ್ಮಾಣ ಕಾರ್ಯ ನಡೆದಿದೆ. ಸೋಮನಾಥೇಶ್ವರ ದೇವರ ಗರ್ಭಗುಡಿಯನ್ನು ಕಲ್ಲಿನಲ್ಲಿ ನಿರ್ಮಿಸಲಾಗಿದ್ದು, ಮಹಿಷಮರ್ದಿನಿ ದೇವಿಯ ಪ್ರತ್ಯೇಕ ಗರ್ಭಗುಡಿಯನ್ನು ನಿರ್ಮಿಸಲಾಗಿದೆ. ತಾಮ್ರ ಲೇಪಿತ ಮೊದಲ ಪೌಳಿ, ಎರಡನೇ ಪೌಳಿ, ಭವ್ಯವಾದ ಪೂರ್ವ ಮತ್ತು ಪಶ್ಚಿಮ ಗೋಪುರಗಳು, ಕಲ್ಲು ಮತ್ತು ಮರದ ಕೆತ್ತಿನೆಯ ಅಗ್ರಸಭೆ, ಕಲ್ಲಿನ ತೀರ್ಥ ಮಂಟಪ ಮತ್ತು ಕಬ್ಬಿಣದ ಹೊದಿಕೆಯ ಧ್ವಜಸ್ತಂಭವನ್ನು ಹೊಸ ದೇವಳ ಒಳಗೊಂಡಿದೆ. ಮೆಟ್ಟಿಲುಗಳೊಂದಿಗೆ 20-ಅಡಿ ಅಗಲದ ಉತ್ತರದ ವಿಸ್ತರಣೆಯನ್ನು ಸಹ ಸೇರಿಸಲಾಗಿದೆ. ಎಲ್ಲೂರಿನ ವಿಷ್ಣುಮೂರ್ತಿ ಭಟ್ (ಕಲ್ಲು ಕೆತ್ತನೆ), ಸಂಪಿಗೆ ನಾರಾಯಣ ಆಚಾರ್ಯ (ಮರದ ಕೆತ್ತನೆ), ನವೀಕರಣ ಕಾರ್ಯವನ್ನು ನಿರ್ವಹಿಸಿದ್ದಾರೆ. ಸುತ್ತುಮುತ್ತಲಿನ ಭಕ್ತರು ಶ್ರಮದಾನದ ಮೂಲಕ ಸೇವೆ ಸಮರ್ಪಿಸಿದ್ದಾರೆ.

 

 

 
Previous articleಬಂಗಾಳ ಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ
Next articleಫೆ.25ರಿಂದ ಮಾ.4ರ ವರೆಗೆ ಅನಂತೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ