ಉಡುಪಿ: ದಲಿತ ಸಮುದಾಯಕ್ಕೆ ಮೀಸಲಿಟ್ಟಿರುವ ಹಣವನ್ನು ರಾಜ್ಯ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಯವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಸದ ರಮೇಶ್ ಜಿಗಜಿಣಗಿ ಮಾತನಾಡಿ, ದಲಿತರಿಗೆ ಏನೂ ಮಾಡಿದರೂ ನಡೆಯುತ್ತದೆ ಎಂಬ ದರ್ಪ ರಾಜ್ಯ ಸರಕಾರಕ್ಕೆ ಬಂದು ಬಿಟ್ಟಿದೆ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿರುವ ಸುಮಾರು 25 ಸಾವಿರ ಕೋಟಿ ರೂ.ಗಳನ್ನು ಈಗಾಗಲೇ ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲೂ ಇನ್ನಷ್ಟು ಹಣ ಬಳಸಿಕೊಳ್ಳಲು ಸಿದ್ಧತೆ ನಡೆದಿದೆ. ದಲಿತರಿಗೆ ಮೇಲಿಂದ ಮೇಲೆ ಅನ್ಯಾಯ ಆಗುತ್ತಿದ್ದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಾಯಿ ಬಿಡುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ದಲಿತರೆಲ್ಲ ಸೇರಿ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣ ದುರುಪಯೋಗ ಮಾಡಿದವರ ಮುಖಕ್ಕೆ ಮಸಿ ಬಳಿಯಬೇಕಾಗುತ್ತದೆ. ಅಷ್ಟು ಮಾತ್ರಲ್ಲದೆ, ಈ ಸರಕಾರದ ವಿರುದ್ಧ ದಲಿತರನ್ನು ಎತ್ತಿಕಟ್ಟಬೇಕಾಗುತ್ತದೆ. ದಲಿತ ಸಮುದಾಯದ ಡಾ| ಎಚ್.ಸಿ. ಮಹದೇವಪ್ಪನವರು ಈಗ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ದಲಿತ ಸಮುದಾಯಕ್ಕೆ ಮೀಸಲಿಟ್ಟಿರುವ ಹಣವನ್ನು ಸರಕಾರ ದುರಪಯೋಗ ಮಾಡಿರುವುದು ಘೋರ ಅಪರಾಧ. ಇಂತಹ ಸರಕಾರಕ್ಕೆ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.
ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬಿಜೆಪಿ ಮುಖಂಡರಿಂದ ಮನವಿ ಸ್ವೀಕರಿಸಿದ್ದಾರೆ.
ಪ್ರತಿಭಟನೆಯಲ್ಲಿ ಶಾಸಕರಾದ ಯಶ್‌ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿ ಹೊಳೆ, ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ವಿಭಾಗ ಪ್ರಭಾರಿ ಕೆ.ಉದಯಕುಮಾರ್‌ಶೆಟ್ಟಿ, ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಸಾಬು ದೊಡ್ಮನಿ, ಗೋಪಾಲ್ ಘಟ್ ಕಾಂಬಳೆ, ದಿನಕರ ಬಾಬು, ಮಾಜಿ ಶಾಸಕ ಹರ್ಷವರ್ಧನ್, ಪ್ರಮುಖರಾದ ಕುಯಿಲಾಡಿ ಸುರೇಶ್ ನಾಯಕ್, ಓದೋ ಗಂಗಪ್ಪ, ದೀಪಕ್ ದೊಡ್ಡಯ್ಯ, ದಿನಕರ ಶೆಟ್ಟಿ ಹೆರ್ಗ, ಪ್ರಭಾಕರ ಪೂಜಾರಿ, ಚಂದ್ರ ಪಂಚವಟಿ, ಪ್ರಭಾಕರ ವಿ., ಉದಯ ಕುಮಾರ್, ರವೀಂದ್ರ, ಸುಮಾ ನಾಯ್ಕ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
