Home Uncategorized ಕಾಪು ಹೊಸಮಾರಿಗುಡಿ ಬ್ರಹ್ಮಕಲಶೋತ್ಸವದ ಹಸಿರು ಹೊರೆಕಾಣಿಕೆ ಪ್ರಚಾರ ವಾಹನಕ್ಕೆ ಚಾಲನೆ

ಕಾಪು ಹೊಸಮಾರಿಗುಡಿ ಬ್ರಹ್ಮಕಲಶೋತ್ಸವದ ಹಸಿರು ಹೊರೆಕಾಣಿಕೆ ಪ್ರಚಾರ ವಾಹನಕ್ಕೆ ಚಾಲನೆ

ಕಾಪು: ಇಲ್ಲಿನ ಶ್ರೀಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ಪ್ರಚಾರ ಪ್ರಯುಕ್ತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಪ್ರಚುರಪಡಿಸಲು ಪ್ರಚಾರ ವಾಹನಕ್ಕೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ ಚಾಲನೆ ನೀಡಿದರು.

ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲ ಶೋತ್ಸವದ ಪ್ರಯುಕ್ತ ಫೆ. 22 23ರಂದು ಹಸಿರುವಾಣಿ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ನಡೆಯಲಿದೆ ಎಂದು ಹಸಿರುವಾಣಿ ಹೊರೆಕಾಣಿಕೆ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಫೆ. 22ರಂದು ದಕ್ಷಿಣ ವಾಹಿನಿ: ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರಡುವ ದಕ್ಷಿಣ ವಾಹಿನಿ ಹೊರೆಕಾಣಿಕೆಯು ಬಂಟ್ವಾಳ ಬೆಳ್ತಂಗಡಿ ಸುಳ್ಯ ಪುತ್ತೂರು ಮಂಗಳೂರು ಉತ್ತರ ಮತ್ತು ದಕ್ಷಿಣ ಮಂಗಳೂರು ಮೂಡಬಿದ್ರಿ ಮುಲ್ಕಿ ಹಾಗೂ ವಿವಿಧ ಪ್ರದೇಶಗಳಿಂದ ಹೊರೆಕಾಣಿಕೆ ಸಮರ್ಪಣೆಯು ಹೆಜಮಾಡಿ ಗಡಿ ದಾಟಿ ಮೂಳೂರು ಕೊಪ್ಪಲಂಗಡಿಗೆ ಬಂದು ಅಲ್ಲಿಂದ ಹೊಸ ಮಾರಿಗುಡಿ ದೇವಳವನ್ನು ತಲುಪಲಿದೆ.

ಫೆ. 23ರಂದು ಉತ್ತರ ವಾಹಿನಿ: ಉಡುಪಿ ಜಿಲ್ಲೆಯ ಬೈಂದೂರು ಕುಂದಾಪುರ ಕಾರ್ಕಳ ಉಡುಪಿ ಕಾಪು ಭಾಗದ ವಿವಿಧ ಪ್ರದೇಗಳಿಂದ ಸಮರ್ಪಿಸಲ್ಪಡುವ ಉತ್ತರ ವಾಹಿನಿ ಹೊರೆಕಾಣಿಕೆಯು ಪಾಂಗಾಳ ಸೇತುವೆ ಬಳಿಯಿಂದ ಹೊಸ ಮಾರಿಗುಡಿ ತಲುಪಲಿದೆ.

ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ಸಂದರ್ಭದಲ್ಲಿ ವಿವಿಧ ಬಿರುದವಾಳಿಗಳೊಂದಿಗೆ ಶೋಭಾಯಾತ್ರೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮುನಿಯಾಲ್ ಉದಯಕುಮಾರ್ ಶೆಟ್ಟಿ, ಮಾಧವ ಆರ್. ಪಾಲನ್, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ಡಾ. ಸುನೀತಾ ಶೆಟ್ಟಿ ,ಮೋಹನ್ ಬಂಗೇರ, ಶಾಂತಲತಾ ಶೆಟ್ಟಿ, ಶ್ರೀಕರ ಶೆಟ್ಟಿ, ಅನಿಲ್ ಕುಮಾರ್, ಅರುಣ್ ಶೆಟ್ಟಿ ಪಾದೂರು, ಕಾಪು ದಿವಾಕರ ಶೆಟ್ಟಿ, ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.

 

 
Previous articleನಂದಿನಿ ನದಿ ಸಂಪೂರ್ಣ ಕಲುಷಿತ: ಐತಿಹಾಸಿಕ ಖಂಡಿಗೆ ಮೀನು ಹಿಡಿಯುವ ಜಾತ್ರೆಗೆ ಸಂಕಷ್ಟ
Next articleಕೆಎಫ್‌ಡಿ(ಮಂಗನ ಕಾಯಿಲೆ) ಉಚಿತ ಚಿಕಿತ್ಸೆ ಎಪಿಎಲ್‌ ಕುಟುಂಬಗಳಿಗೂ ವಿಸ್ತರಣೆ